-> “Prajaseva Andolan” Newspaper Published Coverage -> “Prajaseva Andolan” Newspaper Coverage Published on 20.09.2026 & 21.09.2026.
Prajaseva Andolan
ಗಂಗಾವತಿಯಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭಾ ಕಾರ್ಯಕ್ರಮ
ಕಿಷ್ಕಿಂಧಭಾಗದಲ್ಲಿ ಸಚಿವ ಸಂಪುಟ ಸಭೆ ಆಯೋಜನೆಗೆ ಪ್ರಯತ್ನ: ಶಿವರಾಜ ತಂಗಡಗಿ
—
ಕೊಪ್ಪಳ ಸೆಪ್ಟೆಂಬರ್ 19: ರಾಜ್ಯದಲ್ಲಿ ಈಗಾಗಲೇ ಕಲಬುರಗಿ, ಬೆಳಗಾವಿ ಮತ್ತು ಮೈಸೂರ ಪ್ರಾದೇಶಿಕ ಭಾಗದಲ್ಲಿ ಸಚಿವ ಸಂಪುಟ ಸಭೆಗಳನ್ನು ನಡೆಸಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಈಗ ಮುಂದುವರೆದು ರಾಜ್ಯದ 15 ಕಡೆಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಹೊಸ ಸಂಪ್ರದಾಯವನ್ನು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಆರಂಭಿಸಿದ್ದು, ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಆಲೋಚನೆಯೊಂದಿಗೆ ಕಿಷ್ಕಿಂದಭಾಗದಲ್ಲಿ ಸಚಿವ ಸಂಪುಟ ಸಭೆ ಆಯೋಜನೆ ಮಾಡುವ ದಿಶೆಯಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಗಂಗಾವತಿ ನಗರದ ಅಮರ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಸೆ.19ರಂದು ನಡೆದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಸಿ ಅವರು ಮಾತನಾಡಿದರು.ಅಧಿಕಾರಿಗಳ ಸಮ್ಮುಖದಲ್ಲಿ ಜನರ ಅಹವಾಲು ಆಲಿಸುವ ಉದ್ದೇಶದಿಂದ ಹೊಸದಾಗಿ ಯೋಚಿಸಿ ಹೊಸ ಇಲಾಖೆ ರಚಿಸಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಪ್ರಜಾಸೇವಾ ಆಂದೋಲನ ಸಭೆಯ ಕಾರ್ಯಕ್ರಮ ರೂಪಿಸಿರುವ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರಿಗೆ ಅಭಿನಂದನೆಗಳನ್ನು ತಿಳಿಸುವೆ ಎಂದರು.
2000 ಕ್ಯುಸೆಕ್ ನೀರು ಬಿಡುಗಡೆಗೆ ಸೂಚನೆ:
ಜಿಲ್ಲೆಯಲ್ಲಿ ಮತ್ತೆ ನೀರು ಪೂರೈಕೆಯ ಸವಾಲು ಎದುರಾಗುತ್ತಿದೆ. ನಮ್ಮಲ್ಲಿ ಮಳೆ ಆಗುತ್ತಿಲ್ಲ. ಮಲೆನಾಡಲ್ಲೂ ಮಳೆ ಕೊರತೆ ಮುಂದುವರೆದಿದೆ. ಸಿಂಧನೂರ ಮತ್ತು ರಾಯಚೂರು ಭಾಗಕ್ಕೆ ನೀರು ಬರುತ್ತಿಲ್ಲ ಎಂದು ಅಲ್ಲಿನ ರೈತರು ಒತ್ತಾಯ ಮಾಡುತ್ತಿದ್ದಾರೆ. ರೈತರ ಅಪೇಕ್ಷೆಯಂತೆ ನಾಲ್ಕಾರು ದಿನಗಳ ಕಾಲ 2000 ಕ್ಯುಸೆಕ್ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ವಿದ್ಯುತ್ ಪೂರೈಕೆಗೆ ಕ್ರಮ: ವಿದ್ಯುತ್ ಸರಬರಾಜು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ರೈತರಿಂದ ಮೇಲಿಂದ ಮೇಲೆ ಕರೆಗಳು ಬರುತ್ತಿವೆ. ವಿದ್ಯುತ್ ತಯಾರಿಕಾ ಘಟಕದಲ್ಲಿ ತಾಂತ್ರಿಕ ತೊಂದರೆ ಎದುರಾದ ಕಾರಣ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಕಾಣಿಸಿದೆ. ಈ ಸಮಸ್ಯೆ ಸದ್ಯದಲ್ಲೇ ನಿವಾರಣೆಯಾಗಲಿದೆ ಎಂದು ತಿಳಿಸಿದರು.
ಪ್ರತಿ ಕ್ಷೇತ್ರಕ್ಕೆ 10 ಸಾವಿರ ಮನೆ: ಕೊಪ್ಪಳ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಕನಿಷ್ಟ 10,000 ಮನೆಗಳನ್ನು ನೀಡುವ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಸೂರು ಇಲ್ಲದ ಬಡವರಿಗೆ ಅನುಕೂಲವಾಗಲಿದೆ ಎಂದರು.
ಮುಲಾಜಿಲ್ಲದೇ ಕ್ರಮ: ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸ್ವೀಕೃತ ಅರ್ಜಿಗಳ ಬಗ್ಗೆ ಅಧಿಕಾರಿಗಳು ಹಗುರವಾಗಿ ಭಾವಿಸಬಾರದು. ಮನಬಂದಂತೆ ಉತ್ತರ ನೀಡಬಾರದು. ಪ್ರತಿಯೊಂದು ಅರ್ಜಿಯನ್ನು ಶಿಸ್ತುಬದ್ಧ ರೀತಿಯಲ್ಲಿ ವಿಲೇವಾರಿ ಮಾಡಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಮುಲಾಜಿಲ್ಲದೇ ಕ್ರಮ ಜರುಗಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದರು.
ಶಾಸಕರಾದ ಜನಾರ್ಧನರೆಡ್ಡಿ ಅವರು ಮಾತನಾಡಿ, ಪ್ರಜಾಸೇವಾ ಆಂದೋಲನ ಸಭೆಯು ಉತ್ತಮ ಉದ್ದೇಶ ಹೊಂದಿದೆ ಎಂದು ತಿಳಿಸಿದರು. ಆನೆಗೊಂದಿಗೆ ಪೊಲೀಸ್ ಠಾಣೆ ಬೇಕು. ಗಂಗಾವತಿ ನಗರ ವೇಗವಾಗಿ ಬೆಳೆಯುತ್ತಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗಲು ಬೈಪಾಸ್ ರಸ್ತೆಯ ಅವಶ್ಯಕತೆ ಇದೆ. ಗಂಗಾವತಿಗೆ ಮತ್ತೊಂದು ಪದವಿ ಕಾಲೇಜು ಬೇಕು. ಸಿಟಿ ಸೆಂಟರನಲ್ಲಿ ಗಂಗಾವತಿ ತಾಲೂಕು ಆಡಳಿತ ಸೌಧ ನಿರ್ಮಾಣವಾಗಬೇಕು ಎಂದು ಶಾಸಕರು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಅವರು ಮಾತನಾಡಿ, ಆಡಳಿತವನ್ನು ಜನರ ಮನೆಬಾಗಿಲಿಗೆ ಕರೆದೊಯ್ಯುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರವು ಪ್ರತ್ಯೇಕ ಇಲಾಖೆಯೊಂದನ್ನು ಸ್ಥಾಪಿಸಿದ್ದು, ಆಡಳಿತದಲ್ಲಿ ಪಾರದರ್ಶಕತೆ ತರುವುದು ಸರ್ಕಾರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಈಗಾಗಲೇ ಸ್ವೀಕೃತವಾದ ಪ್ರಜಾಸೇವಾ ಅರ್ಜಿಗಳ ಪೈಕಿ ಶೇ.40 ರಷ್ಟು ಅರ್ಜಿಗಳನ್ನು ಗುಣಾತ್ಮಕ ರೀತಿಯಲ್ಲಿ ವಿಲೇ ಮಾಡಲಾಗಿದೆ. ಇನ್ನುಳಿದ ಅರ್ಜಿಗಳನ್ನು ಸಹ ಹಂತಹಂತವಾಗಿ ವಿಲೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಗಂಗಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ಇಸ್ಮಾಯಿಲ್ ಖಾದ್ರಿ, ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ದೊಡ್ಡಪ್ಪ ದೇಸಾಯಿ, ಸಹಾಯಕ ಆಯುಕ್ತರಾದ ಮಹೆಬೂಬ ಜಿಲಾನಿ, ಗಂಗಾವತಿ ತಹಸೀಲ್ದಾರ ವಸಂತಕುಮಾರಿ ಯು., ತಾಲೂಕು ಪಂಚಾಯತ ಇಓ ರಾಮರೆಡ್ಡಿ ಉಪಸ್ಥಿತರಿದ್ದರು. ಜಯಶ್ರೀ ಅಕ್ಕಂಡಿ ನಿರೂಪಿಸಿದರು.
ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿ: ಗಂಗಾವತಿಯಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭಾ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ದದ ಎಲ್ಲ ಅಧಿಕಾರಿಗಳು ಭಾಗಿಯಾಗಿದ್ದರು.
ಕಾರಟಗಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ
—
ಸರ್ಕಾರಿ ಸೇವೆಗಳನ್ನು ತ್ವರಿತವಾಗಿ ಪಡೆಯಲು ‘ಪ್ರಜಾಸೇವಾ ಆಂದೋಲನ’ ಉತ್ತಮ ವೇದಿಕೆ: ತಹಸೀಲ್ದಾರ ಎಂ.ಕುಮಾರಸ್ವಾಮಿ
—-
ಕೊಪ್ಪಳ ಸೆಪ್ಟೆಂಬರ್ 19 : ಸರ್ಕಾರಿ ಸೇವೆಗಳನ್ನು ತ್ವರಿತವಾಗಿ ಪಡೆಯಲು ಪ್ರಜಾಸೇವಾ ಆಂದೋಲನ’ ಸಭೆಯು ಉತ್ತಮ ವೇದಿಕೆಯಾಗಿದೆ ಎಂದು ಕಾರಟಗಿ ತಹಸೀಲ್ದಾರ ಎಂ.ಕುಮಾರಸ್ವಾಮಿ ಅವರು ಹೇಳಿದರು.
ಪ್ರಜಾಸೇವಾ ಇಲಾಖೆ, ಕಾರಟಗಿ ತಾಲೂಕಾಡಳಿತ ಹಾಗೂ ಪುರಸಭೆ ಕಾರ್ಯಾಲಯ ಸಹಯೋಗದಲ್ಲಿ ಪಟ್ಟಣದ ಅಮ್ಮಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಶನಿವಾರ (ಸೆ. 19ರಂದು) ಆಯೋಜಿಸಲಾಗಿದ್ದ ಪ್ರಜಾಸೇವಾ ಆಂದೋಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬಂತೆ, ಕರ್ನಾಟಕ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಪ್ರಜಾಸೇವಾ ಆಂದೋಲನಾ ಸಭೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಅಹವಾಲುಗಳಿಗೆ ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡಲು ಕ್ರಮವಹಿಸಬೇಕು ಎಂದರು.
ಸಾರ್ವಜನಿಕರ ಬೇಡಿಕೆ, ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಉದ್ದೇಶಿಸಲಾದ ರಾಜ್ಯ ಸರ್ಕಾರದ ಪ್ರಜಾ ಸೇವಾ ಆಂದೋಲವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲು ತಾಲೂಕಾಡಳಿತವು ಬದ್ದವಾಗಿದೆ ಎಂದು ಅವರು ಹೇಳಿದರು.
ವಿವಿಧ ಇಲಾಖೆಗಳ ಕೌಂಟರ್: ಸಾರ್ವಜನಿಕರಿಗೆ ಅನುಕೂಲವಾಗಲೆಂದು ಕಲ್ಯಾಣ ಮಂಟಪದ ಆವರಣದ ಮುಂಭಾಗದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕೌಂಟರಗಳನ್ನು ತೆರೆದಿದ್ದು, ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಅರ್ಜಿಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರಟಗಿ ತಾ.ಪಂ ಇಓ ಲಕ್ಷ್ಮೀದೇವಿ ಯಾದವ್, ಪುರಸಭಾ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ್, ಉಪ ವಲಯ ಅಬಕಾರಿ ಉಪಾಧ್ಯಿಕ್ಷರಾದ ಆಂಜನೇಯ, ಅಬಕಾರಿ ನಿರೀಕ್ಷಕರಾದ ವಿಠ್ಠಲ ಪಿರಗಣ್ಣನವರು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ ಸೇರಿದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರು, ಸದಸ್ಯರು, ಕೆಡಿಪಿ ಸದಸ್ಯರು, ವಿವಿಧ ಇಲಾಖೆಗಳ ನಾಮನಿರ್ದೇಶಿತ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಕೊಪ್ಪಳ: ಹಿಟ್ನಾಳ ಗ್ರಾಮದಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ
ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿ: ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ
—-
ಕೊಪ್ಪಳ ಸೆಪ್ಟೆಂಬರ್ 19 : ಸಾರ್ವಜನಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸ್ಥಳದಲ್ಲೇ ಇತ್ಯರ್ಥಪಡಿಸುವಂತೆ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪ್ರಜಾಸೇವಾ ಇಲಾಖೆ, ಕೊಪ್ಪಳ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ತಾಲ್ಲೂಕಿನ ಹಿಟ್ನಾಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ ವಸತಿ ನಿಲಯದಲ್ಲಿ ಶನಿವಾರ (ಸೆ. 19ರಂದು) ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನರು ಎದುರಿಸುತ್ತಿರುವ ಸಮಸ್ಯೆಗಳು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದ್ದು, ಅವುಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸುವುದು ಅಧಿಕಾರಿಗಳ ಮುಖ್ಯ ಜವಾಬ್ದಾರಿಯಾಗಿದೆ. ಈ ಪ್ರಜಾಸೇವಾ ವೇದಿಕೆಯು ಸಾರ್ವಜನಿಕರು ಮತ್ತು ಆಡಳಿತದ ನಡುವೆ ನೇರ ಸಂಪರ್ಕ ಕಲ್ಪಿಸುವ ಉತ್ತಮ ಅವಕಾಶವಾಗಿದೆ. ಗ್ರಾಮಸ್ಥರು ವೈಯಕ್ತಿಕವಾಗಿ ತಮ್ಮ ಸಮಸ್ಯೆ ಹಾಗೂ ಅಹವಾಲುಗಳನ್ನು ಮುಕ್ತವಾಗಿ ಸಲ್ಲಿಸಬೇಕು ಎಂದು ತಿಳಿಸಿದರು.ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸ್ಥಳೀಯವಾಗಿ ಇತ್ಯರ್ಥವಾಗುವ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲಾಗುವುದು. ತಾಲೂಕು ಅಥವಾ ಜಿಲ್ಲಾ ಮಟ್ಟದಲ್ಲಿ ಪರಿಹರಿಸಬೇಕಾದ ದೀರ್ಘಕಾಲೀನ ಬೇಡಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತ್ವರಿತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಿಟ್ನಾಳ ಹಾಗೂ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಅಹವಾಲುಗಳನ್ನು ಇದೇ ವೇಳೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಾಲಚಂದನ್, ತಹಶಿಲ್ದಾರರಾದ ಬಸವರಾಜ ತನ್ನಳ್ಳಿ, ತಾ.ಪಂ. ಇಓ ಗುಂಡಪ್ಪ ತುರಾದಿ ಸೇರಿದಂತೆ, ಜನಪ್ರತಿನಿಧಿಗಳು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಓ ಹಾಗೂ ಗ್ರಾ.ಪಂ ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಕನಕಗಿರಿ: ನವಲಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ
— ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವುದೇ ಪ್ರಜಾ ಸೇವೆಯ ಉದ್ದೇಶ: ತಹಶಿಲ್ದಾರ ಚಂದ್ರಶೇಖರ್ ಗಾಳಿ
—-
ಕೊಪ್ಪಳ ಸೆಪ್ಟೆಂಬರ್ 19 : ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸಲು ಮತ್ತು ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಕನಕಗಿರಿ ತಹಶಿಲ್ದಾರರಾದ ಚಂದ್ರಶೇಖರ್ ಗಾಳಿ ಅವರು ಹೇಳಿದರು.
ಪ್ರಜಾಸೇವಾ ಇಲಾಖೆ ಹಾಗೂ ಕನಕಗಿರಿ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ನವಲಿಯ ಸರ್ಕಾರಿ ಫ್ರೌಡ ಶಾಲಾ ಆವರಣದಲ್ಲಿ ಶನಿವಾರ (ಸೆ. 19ರಂದು) ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ‘ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಪ್ರಜಾಸೇವೆ ಆಂದೋಲನವು ಸಾರ್ವಜನಿಕರ ಸಮಸ್ಯೆಗಳಿಗೆ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ತ್ವರಿತ ಪರಿಹಾರ ಒದಗಿಸುವ ಮಹತ್ವದ ವೇದಿಕೆಯಾಗಿದೆ. ನವಲಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳ ಸಾರ್ವಜನಿಕರು ತಮ್ಮ ಸಮಸ್ಯೆಗಳು ಹಾಗೂ ಕುಂದುಕೊರತೆಗಳ ಕುರಿತು ಸಲ್ಲಿಸುವ ಅರ್ಜಿಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕನಕಗಿರಿ ತಾ.ಪಂ. ಇಓ ಕೆ.ರಾಜಶೇಖರ್ ಅವರು ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಪ್ರಜಾಸೇವೆ ಆಂದೋಲನವನ್ನು ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಹಾಗೂ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಪದೇಪದೇ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸರ್ಕಾರದ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವುದು ಪ್ರಜಾಸೇವೆ ಆಂದೋಲನದ ಪ್ರಮುಖ ಉದ್ದೇಶವಾಗಿದೆ. ಆದ್ದರಿಂದ ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆಂದೋಲನದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ದಾಖಲಿಸಿ ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಲಾಗುತ್ತದೆ. ಸ್ಥಳದಲ್ಲಿಯೇ ಪರಿಹರಿಸಬಹುದಾದ ಅರ್ಜಿಗಳಿಗೆ ತಕ್ಷಣ ಪರಿಹಾರ ಒದಗಿಸಲಾಗುತ್ತದೆ. ಸ್ಥಳದಲ್ಲಿಯೇ ಪರಿಹರಿಸಲು ಸಾಧ್ಯವಾಗದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ನವಲಿ ಮತ್ತು ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಅರ್ಜಿಯನ್ನು ಇದೇ ವೇಳೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಕಾರ್ಯದರ್ಶಿ ಸಾವಿತ್ರಿ ಪಾಟೀಲ್, ಸಿಪಿಐ ವೀರಣ್ಣ ಹಳ್ಳಿ, ಉಪವಲಯ ಅರಣ್ಯಾಧಿಕಾರಿ ಸುಲೇಮಾನ್, ತಾ.ಪಂ ಸಹಾಯಕ ನಿರ್ದೇಶಕರಾದ ವೀರಣ್ಣ ನಕ್ರಳ್ಳಿ, ನಾಗೇಶ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಯಲಬುರ್ಗಾ: ಸಂಕನೂರ ಗ್ರಾಮದಲ್ಲಿ ಹೊಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ
— ಕಚೇರಿ ಅಲೆದಾಟ ತಪ್ಪಿಸಲು ‘ಪ್ರಜಾಸೇವಾ ಆಂದೋಲನ’: ತಹಶಿಲ್ದಾರ ಪ್ರಕಾಶ ನಾಶಿ
—
ಕೊಪ್ಪಳ ಸೆಪ್ಟೆಂಬರ್ 19 : ಸಾಮಾನ್ಯ ನಾಗರಿಕರು ಸಣ್ಣಪುಟ್ಟ ಕೆಲಸಗಳಿಗೂ, ಸರ್ಕಾರಿ ದಾಖಲೆಗಳಿಗೂ ತಾಲೂಕು ಅಥವಾ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆದಾಡುವುದನ್ನು ತಪ್ಪಿಸಲು ಸರ್ಕಾರವು ‘ಪ್ರಜಾಸೇವಾ ಆಂದೋಲನ’ ಜಾರಿಗೆ ತಂದಿದೆ ಎಂದು ತಹಶಿಲ್ದಾರರಾದ ಪ್ರಕಾಶ ನಾಶಿ ಅವರು ಹೇಳಿದರು.
ಪ್ರಜಾಸೇವಾ ಇಲಾಖೆ ಹಾಗೂ ಯಲಬುರ್ಗಾ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಸಂಕನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ (ಸೆ. 19ರಂದು) ಹಮ್ಮಿಕೊಂಡಿದ್ದ ಹೊಬಳಿ ಮಟ್ಟದ ಪ್ರಜಾಸೇವಾ ಆಂದೋಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎನ್ನುವ ಧ್ಯೆಯವಾಕ್ಯದೊಂದಿಗೆ ಪ್ರಜಾಸೇವಾ ಆಂದೋಲನವನ್ನು ಆಯೋಜಿಸಲಾಗುತ್ತಿದೆ. ಜನರ ಕುಂದು ಕೊರತೆಗಳನ್ನು ಸ್ಥಳೀಯ ಹಂತದಲ್ಲಿಯೇ ಬಗೆಹರಿಸಿಕೊಳ್ಳಲು ಸರ್ಕಾರ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷಿ ಕಾರ್ಯಕ್ರಮ ಇದಾಗಿದೆ. ಜನರಿಂದ ಸಾಕಷ್ಟು ಅರ್ಜಿಗಳು ಬರುತ್ತಿರುವುದರಿಂದ ಅವರಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿರುವುದರಿಂದ ಸ್ಥಳದಲ್ಲೆ ಅರ್ಜಿಗಳಿಗೆ ಪರಿಹಾರ ಲಭಿಸುವಂತಾಗಿದೆ. ಇದರಿಂದಾಗಿ ಸಾರ್ವಜನಿಕರು ಕಚೇರಿಗೆ ಅಲೆದಾಡುವುದು ತಪ್ಪಿಸಿದೆ ಎಂದು ತಿಳಿಸಿದರು.
ಯಲಬುರ್ಗಾ ತಾ.ಪಂ ಇಓ ನೀಲಗಂಗಾ ಬಬಲಾದ ಅವರು ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಸರ್ಕಾರ ಜನರ ಅಹವಾಲಿಗೆ ತುರ್ತಾಗಿ ಸ್ಪಂದಿಸಲೆಂದೇ ಹೊಸದಾಗಿ ಪ್ರಜಾಸೇವೆ ಇಲಾಖೆ ರಚಿಸಿ, ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾಸೇವಾ ಆಂದೋಲನ ಸಭೆಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಭಿಯಾನದ ರೀತಿಯಲ್ಲಿ ನಡೆಯುವಂತೆ ವ್ಯವಸ್ಥೆ ಮಾಡಿದೆ. ಇದರ ಭಾಗವಾಗಿ ಸಂಕನೂರಿನಲ್ಲಿ ಪ್ರಜಾಸೇವಾ ಕಾರ್ಯಕ್ರಮ ನಡೆಯುತ್ತಿದೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ವಿವಿಧ ಇಲಾಖೆಯಿಂದ ಪ್ರಮಾಣ ಪತ್ರ ಹಾಗೂ ಇತರೆ ಸೌಲಭ್ಯಗಳನ್ನು ವಿತರಿಸಲಾಯಿತು. ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಅರ್ಜಿಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಸಹಾಯಕ ನಿರ್ದೇಶಕರಾದ ಹನಮಂತಗೌಡ ಪೊಲೀಸ್ ಪಾಟೀಲ್, ಫಕೀರಪ್ಪ ಕಟ್ಟಿಮನಿ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ ಪಿಡಿಓ ಹಾಗೂ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಕುಷ್ಟಗಿ ಹೊಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ
— ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ‘ಪ್ರಜಾಸೇವೆ ಆಂದೋಲನ’ ಸದ್ಬಳಕೆ ಮಾಡಿಕೊಳ್ಳಿ: ತಹಶಿಲ್ದಾರ ಅಶೋಕ್ ಶಿಗ್ಗಾವಿ
—-
ಕೊಪ್ಪಳ ಸೆಪ್ಟೆಂಬರ್ 19 : ಸಾರ್ವಜನಿಕರು ತಮ್ಮ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ‘ಪ್ರಜಾಸೇವೆ ಆಂದೋಲನ’ ಸಭೆಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕುಷ್ಟಗಿ ತಹಶಿಲ್ದಾರರಾದ ಅಶೋಕ್ ಶಿಗ್ಗಾವಿ ಅವರು ಹೇಳಿದರು.ಪ್ರಜಾಸೇವಾ ಇಲಾಖೆ ಹಾಗೂ ಕುಷ್ಟಗಿ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಕುಷ್ಟಗಿ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಶನಿವಾರ (ಸೆ. 19ರಂದು) ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ನೂತನವಾಗಿ ಜಾರಿಗೆ ತಂದಿರುವ ಪ್ರಜಾಸೇವೆ ಆಂದೋಲನವನ್ನು ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಹಾಗೂ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಪದೇಪದೇ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸರ್ಕಾರದ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವುದು ಪ್ರಜಾಸೇವೆ ಆಂದೋಲನದ ಪ್ರಮುಖ ಉದ್ದೇಶವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕುಷ್ಟಗಿ ತಾಲೂಕು ಪಂಚಾಯತ್ ಇಓ ಅಮರೇಶ್ ಅವರು ಮಾತನಾಡಿ, ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಪ್ರಜಾಸೇವೆ ಆಂದೋಲನವು ಸಾರ್ವಜನಿಕರ ಸಮಸ್ಯೆಗಳಿಗೆ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ತ್ವರಿತ ಪರಿಹಾರ ಒದಗಿಸುವ ಮಹತ್ವದ ವೇದಿಕೆಯಾಗಿದೆ ಎಂದರು.
ಕುಷ್ಟಗಿ ಹೋಬಳಿ ವ್ಯಾಪ್ತಿಯಲ್ಲಿ ಬೀಜಕಲ್, ದೋಟಿಹಾಳ, ಕೇಸೂರು, ಶಿರಗುಂಪಿ, ಮುದೇನೂರು, ಕಂದಕೂರು, ಹಿರೇ ಮನ್ನಾಪುರ, ಗುಮಗೇರಿ ಸೇರಿದಂತೆ ಒಟ್ಟು 8 ಗ್ರಾಮ ಪಂಚಾಯಿತಿಗಳು ಒಳಗೊಂಡಿವೆ. ಈ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಸಮಸ್ಯೆಗಳು ಹಾಗೂ ಕುಂದುಕೊರತೆಗಳ ಕುರಿತು ಅರ್ಜಿ ಸಲ್ಲಿಸಿದಲ್ಲಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಅಹವಾಲುಗಳನ್ನು ಇದೇ ವೇಳೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಪಿಐ ವಿಶ್ವನಾಥ್ ಹಿರೇಗೌಡರ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಕುಕನೂರು ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ
— ಸಾರ್ವಜನಿಕರ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸುವ ಹೊಣೆಗಾರಿಕೆ ಎಲ್ಲ ಇಲಾಖೆಗಳ ಮೇಲಿದೆ: ತಹಶಿಲ್ದಾರ ಬಸವರಾಜ ಬೆಣ್ಣಿಶೀರೂರ
—-
ಕೊಪ್ಪಳ ಸೆಪ್ಟೆಂಬರ್ 19 : ಕುಕನೂರು ಪಟ್ಟಣದ ಮತ್ತು ಹೋಬಳಿಯ ಎಲ್ಲಾ ಗ್ರಾಮಗಳ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸುವ ಹೊಣೆಗಾರಿಕೆ ಎಲ್ಲ ಇಲಾಖೆಗಳ ಮೇಲಿದೆ ಎಂದು ಕುಕನೂರು ತಹಶಿಲ್ದಾರರಾದ ಬಸವರಾಜ ಬೆಣ್ಣಿಶೀರೂರ ಅವರು ಹೇಳಿದರು.
ಪ್ರಜಾಸೇವಾ ಇಲಾಖೆ ಹಾಗೂ ಕುಕನೂರು ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಕುಕನೂರಿನ ವಿದ್ಯಾನಂದ ಕಾಲೇಜು ಆವರಣದಲ್ಲಿ ಶನಿವಾರ (ಸೆ. 19ರಂದು) ಹಮ್ಮಿಕೊಂಡಿದ್ದ ಹೊಬಳಿ ಮಟ್ಟದ ಪ್ರಜಾಸೇವಾ ಆಂದೋಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಪ್ರಜಾಸೇವೆ ಆಂದೋಲನವು ಸಾರ್ವಜನಿಕರ ಸಮಸ್ಯೆಗಳಿಗೆ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ತ್ವರಿತ ಪರಿಹಾರ ಒದಗಿಸುವ ಮಹತ್ವದ ವೇದಿಕೆಯಾಗಿದೆ. ಕುಕನೂರು ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳ ಸಾರ್ವಜನಿಕರು ತಮ್ಮ ಸಮಸ್ಯೆಗಳು ಹಾಗೂ ಕುಂದುಕೊರತೆಗಳ ಕುರಿತು ಸಲ್ಲಿಸಿದ ಅರ್ಜಿಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕುಕನೂರು ತಾ.ಪಂ ಇಓ ಬೆಟದಪ್ಪ ಮಾಳೆಕೊಪ್ಪ ಅವರು ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಪ್ರಜಾಸೇವೆ ಆಂದೋಲನವನ್ನು ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಹಾಗೂ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.
ಈ ಆಂದೋಲನದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ದಾಖಲಿಸಿ ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಲಾಗುತ್ತದೆ. ಸ್ಥಳದಲ್ಲಿಯೇ ಪರಿಹರಿಸಬಹುದಾದ ಅರ್ಜಿಗಳಿಗೆ ತಕ್ಷಣ ಪರಿಹಾರ ಒದಗಿಸಲಾಗುತ್ತದೆ. ಸ್ಥಳದಲ್ಲಿಯೇ ಪರಿಹರಿಸಲು ಸಾಧ್ಯವಾಗದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.





