-> ಪತ್ರಿಕೆಯಲ್ಲಿ ಪ್ರಕಟವಾದ “ಪ್ರಜಾಸೇವಾ ಆಂದೋಲನ” ಸುದ್ದಿ -> 20.09.2026 ಮತ್ತು 21.09.2026 ರಂದು ಪತ್ರಿಕೆಯಲ್ಲಿ ಪ್ರಕಟವಾದ “ಪ್ರಜಾಸೇವಾ ಆಂದೋಲನ” ಸುದ್ದಿ ಪ್ರಜಾಸೇವಾ ಆಂದೋಲನ

ಗಂಗಾವತಿಯಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭಾ ಕಾರ್ಯಕ್ರಮ
ಕಿಷ್ಕಿಂಧಭಾಗದಲ್ಲಿ ಸಚಿವ ಸಂಪುಟ ಸಭೆ ಆಯೋಜನೆಗೆ ಪ್ರಯತ್ನ: ಶಿವರಾಜ ತಂಗಡಗಿ —
ಕೊಪ್ಪಳ ಸೆಪ್ಟೆಂಬರ್ 19: ರಾಜ್ಯದಲ್ಲಿ ಈಗಾಗಲೇ ಕಲಬುರಗಿ, ಬೆಳಗಾವಿ ಮತ್ತು ಮೈಸೂರ ಪ್ರಾದೇಶಿಕ ಭಾಗದಲ್ಲಿ ಸಚಿವ ಸಂಪುಟ ಸಭೆಗಳನ್ನು ನಡೆಸಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಈಗ ಮುಂದುವರೆದು ರಾಜ್ಯದ 15 ಕಡೆಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಹೊಸ ಸಂಪ್ರದಾಯವನ್ನು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಆರಂಭಿಸಿದ್ದು, ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಆಲೋಚನೆಯೊಂದಿಗೆ ಕಿಷ್ಕಿಂದಭಾಗದಲ್ಲಿ ಸಚಿವ ಸಂಪುಟ ಸಭೆ ಆಯೋಜನೆ ಮಾಡುವ ದಿಶೆಯಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಗಂಗಾವತಿ ನಗರದ ಅಮರ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಸೆ.19ರಂದು ನಡೆದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಸಿ ಅವರು ಮಾತನಾಡಿದರು.ಅಧಿಕಾರಿಗಳ ಸಮ್ಮುಖದಲ್ಲಿ ಜನರ ಅಹವಾಲು ಆಲಿಸುವ ಉದ್ದೇಶದಿಂದ ಹೊಸದಾಗಿ ಯೋಚಿಸಿ ಹೊಸ ಇಲಾಖೆ ರಚಿಸಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಪ್ರಜಾಸೇವಾ ಆಂದೋಲನ ಸಭೆಯ ಕಾರ್ಯಕ್ರಮ ರೂಪಿಸಿರುವ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರಿಗೆ ಅಭಿನಂದನೆಗಳನ್ನು ತಿಳಿಸುವೆ ಎಂದರು.
2000 ಕ್ಯುಸೆಕ್ ನೀರು ಬಿಡುಗಡೆಗೆ ಸೂಚನೆ: ಜಿಲ್ಲೆಯಲ್ಲಿ ಮತ್ತೆ ನೀರು ಪೂರೈಕೆಯ ಸವಾಲು ಎದುರಾಗುತ್ತಿದೆ. ನಮ್ಮಲ್ಲಿ ಮಳೆ ಆಗುತ್ತಿಲ್ಲ. ಮಲೆನಾಡಲ್ಲೂ ಮಳೆ ಕೊರತೆ ಮುಂದುವರೆದಿದೆ. ಸಿಂಧನೂರ ಮತ್ತು ರಾಯಚೂರು ಭಾಗಕ್ಕೆ ನೀರು ಬರುತ್ತಿಲ್ಲ ಎಂದು ಅಲ್ಲಿನ ರೈತರು ಒತ್ತಾಯ ಮಾಡುತ್ತಿದ್ದಾರೆ. ರೈತರ ಅಪೇಕ್ಷೆಯಂತೆ ನಾಲ್ಕಾರು ದಿನಗಳ ಕಾಲ 2000 ಕ್ಯುಸೆಕ್ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ವಿದ್ಯುತ್ ಪೂರೈಕೆಗೆ ಕ್ರಮ: ವಿದ್ಯುತ್ ಸರಬರಾಜು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ರೈತರಿಂದ ಮೇಲಿಂದ ಮೇಲೆ ಕರೆಗಳು ಬರುತ್ತಿವೆ. ವಿದ್ಯುತ್ ತಯಾರಿಕಾ ಘಟಕದಲ್ಲಿ ತಾಂತ್ರಿಕ ತೊಂದರೆ ಎದುರಾದ ಕಾರಣ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಕಾಣಿಸಿದೆ. ಈ ಸಮಸ್ಯೆ ಸದ್ಯದಲ್ಲೇ ನಿವಾರಣೆಯಾಗಲಿದೆ ಎಂದು ತಿಳಿಸಿದರು.
ಪ್ರತಿ ಕ್ಷೇತ್ರಕ್ಕೆ 10 ಸಾವಿರ ಮನೆ: ಕೊಪ್ಪಳ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಕನಿಷ್ಟ 10,000 ಮನೆಗಳನ್ನು ನೀಡುವ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಸೂರು ಇಲ್ಲದ ಬಡವರಿಗೆ ಅನುಕೂಲವಾಗಲಿದೆ ಎಂದರು.
ಮುಲಾಜಿಲ್ಲದೇ ಕ್ರಮ: ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸ್ವೀಕೃತ ಅರ್ಜಿಗಳ ಬಗ್ಗೆ ಅಧಿಕಾರಿಗಳು ಹಗುರವಾಗಿ ಭಾವಿಸಬಾರದು. ಮನಬಂದಂತೆ ಉತ್ತರ ನೀಡಬಾರದು. ಪ್ರತಿಯೊಂದು ಅರ್ಜಿಯನ್ನು ಶಿಸ್ತುಬದ್ಧ ರೀತಿಯಲ್ಲಿ ವಿಲೇವಾರಿ ಮಾಡಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಮುಲಾಜಿಲ್ಲದೇ ಕ್ರಮ ಜರುಗಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದರು.
ಶಾಸಕರಾದ ಜನಾರ್ಧನರೆಡ್ಡಿ ಅವರು ಮಾತನಾಡಿ, ಪ್ರಜಾಸೇವಾ ಆಂದೋಲನ ಸಭೆಯು ಉತ್ತಮ ಉದ್ದೇಶ ಹೊಂದಿದೆ ಎಂದು ತಿಳಿಸಿದರು. ಆನೆಗೊಂದಿಗೆ ಪೊಲೀಸ್ ಠಾಣೆ ಬೇಕು. ಗಂಗಾವತಿ ನಗರ ವೇಗವಾಗಿ ಬೆಳೆಯುತ್ತಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗಲು ಬೈಪಾಸ್ ರಸ್ತೆಯ ಅವಶ್ಯಕತೆ ಇದೆ. ಗಂಗಾವತಿಗೆ ಮತ್ತೊಂದು ಪದವಿ ಕಾಲೇಜು ಬೇಕು. ಸಿಟಿ ಸೆಂಟರನಲ್ಲಿ ಗಂಗಾವತಿ ತಾಲೂಕು ಆಡಳಿತ ಸೌಧ ನಿರ್ಮಾಣವಾಗಬೇಕು ಎಂದು ಶಾಸಕರು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಅವರು ಮಾತನಾಡಿ, ಆಡಳಿತವನ್ನು ಜನರ ಮನೆಬಾಗಿಲಿಗೆ ಕರೆದೊಯ್ಯುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರವು ಪ್ರತ್ಯೇಕ ಇಲಾಖೆಯೊಂದನ್ನು ಸ್ಥಾಪಿಸಿದ್ದು, ಆಡಳಿತದಲ್ಲಿ ಪಾರದರ್ಶಕತೆ ತರುವುದು ಸರ್ಕಾರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಈಗಾಗಲೇ ಸ್ವೀಕೃತವಾದ ಪ್ರಜಾಸೇವಾ ಅರ್ಜಿಗಳ ಪೈಕಿ ಶೇ.40 ರಷ್ಟು ಅರ್ಜಿಗಳನ್ನು ಗುಣಾತ್ಮಕ ರೀತಿಯಲ್ಲಿ ವಿಲೇ ಮಾಡಲಾಗಿದೆ. ಇನ್ನುಳಿದ ಅರ್ಜಿಗಳನ್ನು ಸಹ ಹಂತಹಂತವಾಗಿ ವಿಲೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಗಂಗಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ಇಸ್ಮಾಯಿಲ್ ಖಾದ್ರಿ, ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ದೊಡ್ಡಪ್ಪ ದೇಸಾಯಿ, ಸಹಾಯಕ ಆಯುಕ್ತರಾದ ಮಹೆಬೂಬ ಜಿಲಾನಿ, ಗಂಗಾವತಿ ತಹಸೀಲ್ದಾರ ವಸಂತಕುಮಾರಿ ಯು., ತಾಲೂಕು ಪಂಚಾಯತ ಇಓ ರಾಮರೆಡ್ಡಿ ಉಪಸ್ಥಿತರಿದ್ದರು. ಜಯಶ್ರೀ ಅಕ್ಕಂಡಿ ನಿರೂಪಿಸಿದರು.
ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿ: ಗಂಗಾವತಿಯಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭಾ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ದದ ಎಲ್ಲ ಅಧಿಕಾರಿಗಳು ಭಾಗಿಯಾಗಿದ್ದರು.




